ಮಾದ್ರಿ
ನಿರಾಸೆಯೇ ಮೂರ್ತಿವೆತ್ತಂತೆ ಕುಳಿತಿದ್ದಳು ಮಾದ್ರಿ. ಎಲ್ಲಾ
ಹೆಣ್ಣುಗಳಿಗಿರುವ ಸಹಜ ಆಸೆಯಂತೆ ಅವಳಿಗೂ ತಾಯಿಯಾಗುವ ಬಯಕೆ. ಆದರೇನು? ಇದೇನು ಕೇಳಲ್ಪಟ್ಟೆ ಇಂದು? ಬೇಟೆಗೆಂದು ಕಾಡಿಗೆ ಹೋದ
ಪಾಂಡು ಮಹಾರಾಜ ಶಾಪದೊಂದಿಗೆ ಮರಳಿದ್ದಾನೆ. ಮೃಗರೂಪಿಯಾಗಿ ಪತ್ನಿಯೊಂದಿಗೆ ಕಾಮಕೇಳಿಯಲ್ಲಿದ್ದ
ಕಿಂದಮ ಋಷಿಯನ್ನು ಮೃಗವೆಂದು ಭಾವಿಸಿ ಶರ ಪ್ರಯೋಗಿಸಿದನಂತೆ! ಮಹಾರಾಜನಿಗಾದರೂ ಅರಿಯದೇ ಆದ
ಪ್ರಮಾದವದು! ಕೊನೆಯುಸಿರು ಬಿಡುವ ಮುನ್ನ ಕಿಂದಮ ಋಷಿಯಾದರೂ ಕೊಟ್ಟ ಶಾಪವೆಂತಹುದು!
"ಪ್ರೇಮದಿಂದ ಪತ್ನಿಯನ್ನು ಸೇರುವ ಬಯಕೆಯಿಂದ ಸಮೀಪಿಸಿದ ಮರುಘಳಿಗೆಯೇ ಮರಣ!"
ಭಗವಂತಾ! ವಿವಾಹವಾಗಿ ವರುಷ ಕಳೆಯುವ ಮೊದಲೇ ಇಂಥ ಪರಿಸ್ಥಿತಿಯೇ! ಪತಿಯೊಂದಿಗೆ ಇದ್ದೂ ಅವನನ್ನು ನಾನು ಸೇರುವಂತಿಲ್ಲ! ವೈವಾಹಿಕ ಜೀವನ ಸಾರ್ಥಕ್ಯ ಮಗುವನ್ನು ಹೆತ್ತಾಗಲೇ ಅಲ್ಲವೇ? ತನ್ನ ಜೀವನ ಕಾಡು ಕುಸುಮವಾಗಿ ನಲುಗಿ ಹೋಗುವುದೇ? ಹೂವು ಕಾಯಾಗಿ ಹಣ್ಣಾಗದೆ ಇದ್ದರೆ ಅದರ ಜನ್ಮವೇ ವ್ಯರ್ಥ!
"ಪ್ರೇಮದಿಂದ ಪತ್ನಿಯನ್ನು ಸೇರುವ ಬಯಕೆಯಿಂದ ಸಮೀಪಿಸಿದ ಮರುಘಳಿಗೆಯೇ ಮರಣ!"
ಭಗವಂತಾ! ವಿವಾಹವಾಗಿ ವರುಷ ಕಳೆಯುವ ಮೊದಲೇ ಇಂಥ ಪರಿಸ್ಥಿತಿಯೇ! ಪತಿಯೊಂದಿಗೆ ಇದ್ದೂ ಅವನನ್ನು ನಾನು ಸೇರುವಂತಿಲ್ಲ! ವೈವಾಹಿಕ ಜೀವನ ಸಾರ್ಥಕ್ಯ ಮಗುವನ್ನು ಹೆತ್ತಾಗಲೇ ಅಲ್ಲವೇ? ತನ್ನ ಜೀವನ ಕಾಡು ಕುಸುಮವಾಗಿ ನಲುಗಿ ಹೋಗುವುದೇ? ಹೂವು ಕಾಯಾಗಿ ಹಣ್ಣಾಗದೆ ಇದ್ದರೆ ಅದರ ಜನ್ಮವೇ ವ್ಯರ್ಥ!
ಹೀಗೆ ಮನದಲ್ಲೇ ಪ್ರಲಾಪಿಸುತ್ತ ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ
ಕುಳಿತಿದ್ದಳು. ಅದೇ ವೇಳೆಗೆ ಪಾಂಡು ರಾಜನ ಆಗಮನವಾಯಿತು. ತಕ್ಷಣವೇ ಎಚ್ಚೆತ್ತು
ಮಹಾರಾಜನನ್ನು ಸ್ವಾಗತಿಸಿದಳು.
"ನಿಜವೇ ಮಹಾರಾಜ ನಾನು ಕೇಳಿದ್ದು?"
ತಪ್ಪಿತಸ್ಥ ಭಾವನೆಯಲ್ಲಿ ಈಗಾಗಲೇ ಕುಗ್ಗಿದ್ದ ಪಾಂಡು ಮೌನಕ್ಕೆ
ಶರಣಾದ. ಅವನ ನಿಟ್ಟುಸಿರೇ ಅದನ್ನು ಹೌದೆಂದು ಸಾರಿ ಹೇಳುತ್ತಿತ್ತು. ಕಿರಿಯ ಪತ್ನಿ ಮಾದ್ರಿಯಲ್ಲಿ
ಹೆಚ್ಚು ಪ್ರೇಮ ಪಾಂಡುವಿಗೆ. ಈಗ ಅವಳನ್ನು ಎದುರಿಸುವ ಧೈರ್ಯವಿಲ್ಲದೇ ಕಂಗೆಡುತ್ತಲಿದ್ದ.
"ಕ್ಷಮಿಸು ಪ್ರಿಯೆ, ನಿನಗೆ ಯಾವ ಸುಖವೂ ಇಲ್ಲದಂತೆ ಮಾಡಿಬಿಟ್ಟೆ! ವಿವೇಚನೆಯಿಲ್ಲದೇ
ಕಿಂದಮನ ವಧಿಸಿ ಅವನ ಶಾಪವನ್ನು ಹೊತ್ತಿದ್ದೇನೆ. ನಿಮ್ಮಿಬ್ಬರಿಗೂ ವೈಧವ್ಯದ ಪಟ್ಟವನ್ನು
ಕೊಡುವುದಕ್ಕಿಂತ ನಾನು ವೈರಾಗಿಯಾಗಿ ಬದುಕುತ್ತೇನೆ. ನಾನಿನ್ನು ರಾಜ್ಯಕೋಶಗಳನ್ನು ತ್ಯಜಿಸಿ
ಶತಶೃಂಗ ಪರ್ವತದೆಡೆಗೆ ಹೋಗಿ ಕುಟೀರ ವಾಸ ಮಾಡುತ್ತೇನೆ ಮಾದ್ರಿ. ದಯಮಾಡಿ ನನ್ನನ್ನು
ಕ್ಷಮಿಸಿಬಿಡು." ದೀನನಾಗಿ ಬೇಡಿದ ಪಾಂಡು.
ಅಷ್ಟರವರೆಗೂ ನಿರಾಸೆಯಿಂದ ತಪಿಸುತ್ತಿದ್ದ ಮಾದ್ರಿಯ ದುಃಖದ
ಕಟ್ಟೆಯೊಡೆಯಿತು. ಅವಳೇನಾದರೂ ಮಾತನಾಡುವ ಮುನ್ನ ಪಾಂಡು ಪುನಃ ಮಾತು ಮುಂದುವರೆಸಿದ.
"ನೀವಿಬ್ಬರೂ ನನ್ನನ್ನು ಹಿಂಬಾಲಿಸಿ ಕಷ್ಟಪಡುವುದು ಬೇಡ ಮಾದ್ರಿ. ಸುಖದ
ಸುಪ್ಪತ್ತಿಗೆಯಲ್ಲಿ ಬೆಳೆದ ನೀವು ತವರಿಗಾದರೂ ತೆರಳಬಹುದು, ಇಲ್ಲವೇ ನಿಯೋಗ ಪದ್ಧತಿಯಿಂದ ವಂಶವನ್ನು ಮುಂದುವರೆಸಬಹುದು..."
"ಮಹಾರಾಜ!" ಮಾತು ಪೂರ್ತಿಗೊಳಿಸುವ ಮುನ್ನವೇ ಮಾದ್ರಿಯ ಧ್ವನಿ ಕಠೋರವಾಗಿ ಕಿವಿಗೆ ಅಪ್ಪಳಿಸಿತ್ತು.
ಪಾಂಡುವಿನ ತಂದೆ ವಿಚಿತ್ರವೀರ್ಯ ಕ್ಷಯ ರೋಗಕ್ಕೆ ತುತ್ತಾಗಿ
ವಂಶೋದ್ಧಾರಕ ಜನಿಸುವ ಮುನ್ನವೇ ಮರಣಿಸಿದ್ದ. ಆಗ ವಿಚಿತ್ರವೀರ್ಯನ ತಾಯಿ ಸತ್ಯವತಿ ತನ್ನ
ವಿವಾಹಪೂರ್ವದಲ್ಲಿ ಪರಾಶರ ಮಹರ್ಷಿಗಳಿಂದ ಪಡೆದ ಪುತ್ರ ವ್ಯಾಸನನ್ನು ಕರೆಯಿಸಿ ಸೊಸೆಯರಾದ ಅಂಬಿಕೆ
ಹಾಗೂ ಅಂಬಾಲಿಕೆಯರೊಂದಿಗೆ ನಿಯೋಗವನ್ನು ಏರ್ಪಡಿಸಿದ್ದಳು. ಇಷ್ಟವಿಲ್ಲದಿದ್ದರೂ ವಂಶಕ್ಕಾಗಿ ಅವರು
ಒಪ್ಪಲೇಬೇಕಾಗಿತ್ತು. ವ್ಯಾಸರಾದರೂ ಯಾವುದೇ ವಾಸನೆಯ ಉದ್ದೇಶವಿಲ್ಲದೇ ಲೋಕ ಕಲ್ಯಾಣಕ್ಕಾಗಿ
ವೀರ್ಯದಾನ ಮಾಡಿದರು. ಆದರೆ ಅಂಬಿಕೆ, ಅಂಬಾಲಿಕೆಯರು
ವ್ಯಾಸರ ರೂಪವನ್ನು ಕಂಡು ಭಯಗೊಂಡರು. ಮನಃಪೂರ್ವಕವಾಗಿ ನಿಯೋಗದಲ್ಲಿ ಪಾಲ್ಗೊಳ್ಳಲು ಅವರಿಗೆ
ಸಾಧ್ಯವಾಗಲಿಲ್ಲ. ವ್ಯಾಸ ಮುನಿಯ ರೂಪವನ್ನು ಕಂಡು ಭಯದಿಂದ ಅಂಬಿಕೆ ಕಣ್ಣು ಮುಚ್ಚಿಕೊಂಡಿದ್ದಕ್ಕೆ
ಧೃತರಾಷ್ಟ್ರ ಕುರುಡನಾಗಿಯೂ, ಅಂಬಾಲಿಕೆ ಬಿಳಿಚಿಕೊಂಡಿದ್ದಕ್ಕೆ
ಪಾಂಡು ಕಳಾಹೀನನಾಗಿಯೂ ಜನಿಸಿದರು. ಇದೆಲ್ಲ ವಿಚಾರ ತಿಳಿದಿದ್ದ ಮಾದ್ರಿ ಯಾವುದೇ ಕಾರಣಕ್ಕೂ
ನಿಯೋಗಕ್ಕೆ ಸಿದ್ಧಳಿರಲಿಲ್ಲ.
"ನಿಜ ಮಹಾರಾಜ, ನನಗೆ ಒಂದು ಹೆಣ್ಣಿಗಿರುವ
ಎಲ್ಲಾ ಆಸೆಗಳೂ ಇವೆ. ಮುದ್ದಾದ ಮಕ್ಕಳನ್ನು ಹೊತ್ತು ಹೆತ್ತು ತಾಯಿಯಾಗುವ ಸುಖವನ್ನು ಕಾಣುವ
ಹಂಬಲವೂ ಇದೆ. ಆದರೆ ಪತಿಯನ್ನು ತ್ಯಾಗ ಮಾಡಿ ತವರಿಗೆ ತೆರಳುವ ಸಾಹಸ ಮಾಡಲಾರೆ. ಇನ್ನು ಆ
ಅನಿಷ್ಟದ ನಿಯೋಗ ಪದ್ಧತಿಗಿಂತಲೂ ಜೀವನ ಪರ್ಯಂತ ನಿಮ್ಮೊಂದಿಗೆ ಪರಿಪೂರ್ಣವಲ್ಲದ ದಾಂಪತ್ಯವಾದರೂ
ಸರಿ, ಇರಬಲ್ಲೆ.
ದಯವಿಟ್ಟು ನಿಮ್ಮೊಂದಿಗೆ ಬದುಕುವ ಹಕ್ಕನ್ನು ನನ್ನಿಂದ ಕಸಿದು ತಿರಸ್ಕರಿಸಬೇಡಿ ಮಹಾರಾಜ, ನಿಮ್ಮ ಬ್ರಹ್ಮಚರ್ಯಕ್ಕೆ
ಅಡ್ಡಿಯಾಗದಂತೆ, ನಿಮ್ಮ ಮನಸ್ಸು ವಿಚಲಿತಗೊಳ್ಳದಂತೆ ನಾನು ದೂರವೇ ಇರುತ್ತೇನೆ."
ಬೇಡಿಕೊಂಡಳು ಮಾದ್ರಿ.
ನಿಡಿದಾದ ಉಸಿರಿನೊಂದಿಗೆ "ಸರಿ ಮಾದ್ರಿ, ನಿನ್ನ ಹಣೆಬರಹ ಹಾಗೆಯೇ
ಬರೆದಿದ್ದಲ್ಲಿ ನಾನು ತಪ್ಪಿಸಲಾರೆ. ವನವಾಸಕ್ಕೆ ಸಿದ್ಧಳಾಗು!" ಎಂದು ನುಡಿದ ಪಾಂಡು
ಅಂತಃಪುರದಿಂದ ಹೊರಟುಹೋದ.
ಕಣ್ಣೀರಧಾರೆಯನ್ನು ಒರೆಸಿಕೊಂಡು ಮಾನಸಿಕ ಸ್ಥೈರ್ಯವನ್ನು
ಒಗ್ಗೂಡಿಸಿಕೊಳ್ಳುತ್ತ ತನಗೆ ತಾನೇ ಧೈರ್ಯ ತುಂಬಿಕೊಂಡಳು.
*
ಪತ್ನಿಯರಿಬ್ಬರ ಮನಸ್ಸನ್ನೂ ಪರಿವರ್ತಿಸಲಾಗದೇ ಹೋದ ಪಾಂಡು, ಅರಮನೆಯ ಸುಖಭೋಗಗಳನ್ನು
ತ್ಯಜಿಸಿ ವಿರಕ್ತ ಜೀವನಕ್ಕಾಗಿ ಹಂಬಲಿಸಿ ಶತಶೃಂಗ ಪರ್ವತದೆಡೆಗೆ ನಡೆದ. ಕುಟೀರವೊಂದನ್ನು ನಿರ್ಮಿಸಿಕೊಂಡು
ತಪಸ್ವಿಯಂತೆ ಬದುಕು ಸವೆಸತೊಡಗಿದ. ಆಗಾಗ ಅವನ ಅಂತರಂಗ ಚುಚ್ಚಿ ನುಡಿಯುತ್ತಿದ್ದ
ಕಿಡಿನುಡಿಗಳನ್ನು ಸಹಿಸಲಾರದವನಾಗಿದ್ದ. ಕುಂತಿ ಮಾದ್ರಿಯರು ಮುಂದೇನು ಎಂಬ ಪ್ರಶ್ನೆ
ಹೊತ್ತಿದ್ದರು. ಅವರನ್ನು ಕಂಡಾಗಲೆಲ್ಲ ಹೀಗೆ ಅಡವಿಯಲ್ಲೇ ನಮ್ಮ ಜೀವನ ಕೊನೆಯಾಗಬೇಕೇ ಎಂದು ಬಾರಿ
ಬಾರಿಗೂ ಕೇಳಿದಂತೆ ಪಾಂಡುವಿಗೆ ಅನಿಸುತ್ತಿತ್ತು.
ಆದರೆ ಅದೊಂದು ದಿನ ಶುಭಗಳಿಗೆ, ಶುಭಸುದ್ದಿ ಎನ್ನಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ಬೀಳುವಂಥ
ವಿಚಾರವೊಂದು ಪಾಂಡುವಿನ ಎದುರಿಗೆ ಬಂದೇ ಬಿಟ್ಟಿತು.
ಕುಂತಿ ವಿವಾಹ ಪೂರ್ವದಲ್ಲಿ ದೂರ್ವಾಸ ಮುನಿಗೆ ಮಾಡಿದ ಆತಿಥ್ಯದಿಂದ
ಸಂತೋಷಗೊಂಡು ದೇವತೆಗಳಿಂದ ಪುತ್ರ ಪ್ರಾಪ್ತಿಯಾಗುವ ವರಗಳನ್ನು ಪಡೆದಿದ್ದಳು. ಪಡೆದಿದ್ದು 5 ವರಗಳೆಂದು ಹೇಳಿದರೂ
ಅದರಲ್ಲಿ ಒಂದನ್ನು ಈಗಾಗಲೇ ಉಪಯೋಗಿಸಿ ಪುತ್ರಪ್ರಾಪ್ತಿಯಾಗಿರುವುದನ್ನು (ಕರ್ಣ) ಹೇಳಲಾರದೆ
ಹೋದಳು ಕುಂತಿ.
ತನಗಾದ ದೂರ್ವಾಸಾನುಗ್ರಹವನ್ನು ಪಾಂಡುವಿಗೆ ಹೇಳಿದಾಗ ಇದು ಸಾಧ್ಯವೇ
ಎಂದು ಮೊದಲು ಅಚ್ಚರಿಗೆ ಒಳಗಾದ ಪಾಂಡು. ಪುತ್ರಹೀನನಾಗಿ ಇರುವುದಕ್ಕಿಂತಲೂ, ನಿಯೋಗಕ್ಕಿಂತಲೂ
ಇದು ಉತ್ತಮ ದಾರಿಯೆನಿಸಿತು. ಅಲ್ಲದೇ ದೇವತೆಗಳ ಅಂಶದಿಂದ ಜನಿಸಿದ ಪುತ್ರರು ಸದ್ಗತಿಯನ್ನೇ
ನೀಡುವರು. ದೇವತೆಗಳು ಕೂಡ ಕಷ್ಟಕಾಲದಲ್ಲಿ ಸಹಕರಿಸುವರು ಎಂದೆಲ್ಲ ಮಥಿಸಿ ಕೊನೆಗೂ ಮಾನಸ
ಪಿತೃತ್ವಕ್ಕೆ ಸಿದ್ಧನಾಗಿ ಕುಂತಿ ಪುತ್ರರನ್ನು ಪಡೆಯಲು ಒಪ್ಪಿಗೆ ಸೂಚಿಸಿದ.
ಅದರಂತೆ ಕುಂತಿ ಯಮಧರ್ಮನನ್ನು ಪ್ರಾರ್ಥಿಸಿ ಕುಲಜ್ಯೇಷ್ಠನಾದ
ಯುಧಿಷ್ಠಿರನನ್ನು ಪಡೆದಳು. ಹಾಗೆಯೇ ಕಾಲಕ್ರಮೇಣದಲ್ಲಿ ವಾಯುದೇವನಿಂದ ಭೀಮಸೇನನನ್ನೂ, ಇಂದ್ರನಿಂದ ಸಾಹಸಿಯೂ, ಬಿಲ್ವಿದ್ಯೆಯಲ್ಲಿ ಚತುರನಾದ
ಅರ್ಜುನನನ್ನೂ ಪಡೆದಳು.
ಈಗ ಮಾದ್ರಿಯ ಚಿಂತೆ ಹೆಚ್ಚಿತ್ತು. ಕುಂತಿಯ ಮೂರು ಪುತ್ರರಿಂದ ಪಾಂಡುವೇನೋ
ಸಂತುಷ್ಟನಾಗಿದ್ದ. ಆದರೆ ವರಗಳ ಸಹಾಯದಿಂದ ಮಕ್ಕಳನ್ನು ಪಡೆದು ತಾಯ್ತನದ ಸುಖವನ್ನು ಅನುಭವಿಸಿದ
ಕುಂತಿಯಂತೆ ತಾನೂ ಮಕ್ಕಳನ್ನು ಪಡೆಯಬಹುದೇ ಎಂಬ ಆಸೆ ಮಾದ್ರಿಯಲ್ಲಿ ಹುಟ್ಟಿಕೊಂಡಿತು. ಅದನ್ನು
ಪಾಂಡುವಿನಲ್ಲಿ ಹೇಳಿಕೊಂಡಳು ಕೂಡ.
"ಮಹಾರಾಜ, ನನಗೂ ಒಮ್ಮೆಯಾದರೂ
ತಾಯ್ತನದ ಸುಖವನ್ನು ಅನುಭವಿಸುವ ಬಯಕೆಯಿದೆ. ಹೇಗೂ ಅಕ್ಕನಲ್ಲಿ ಮತ್ತೆರಡು ವರಗಳಿವೆಯಲ್ಲ, ನನಗೆ ಒಂದಾದರೂ ವರವನ್ನು
ಕೊಡುವಂತೆ ತಾವು ಕೇಳಬಹುದೇ? ನಾನಾಗಿ ಅದನ್ನು
ಕೇಳಲಾರೆ" ಎಂದು ಪತಿಯಲ್ಲಿ ಬಿನ್ನಯಿಸಿದಳು.
ಅವಳ ನೋವು, ಆಸೆಯನ್ನು
ಅರ್ಥೈಸಿಕೊಂಡ ಪಾಂಡು ಅದನ್ನು ಕುಂತಿಯೊಂದಿಗೆ ಹೇಳಿಕೊಂಡ.
"ರಾಣಿ, ನಮಗೆ
ಪುತ್ರಪ್ರಾಪ್ತಿಯೇನೋ ಆಗಿದೆ. ಆ ವಿಚಾರದಲ್ಲಿ ನಾನೀಗ ಸಂತೃಪ್ತ. ಆದರೆ ಪಾಪ, ಮಾದ್ರಿಗೂ ತಾಯ್ತನವನ್ನು
ಅನುಭವಿಸುವ ಬಯಕೆ ಇರಬಹುದಲ್ಲ, ನೀನೇಕೆ ನಿನ್ನಲ್ಲಿ
ಉಳಿದಿರುವ ಎರಡು ವರದಲ್ಲಿ ಒಂದನ್ನು ಅವಳಿಗೆ ನೀಡಬಾರದು?"
ಪಾಂಡುವಿಗೆ ಕಿರಿಯ ಪತ್ನಿಯಲ್ಲಿ ಹೆಚ್ಚಿನ ವ್ಯಾಮೋಹ ಇರುವುದನ್ನು
ಅರಿಯದವಳೇನಲ್ಲ ಕುಂತಿ. ಆದರೆ ಪಾಂಡುವಿನ ಬಿನ್ನಹಕ್ಕೆ ಇಲ್ಲವೆನ್ನಲಾರದೇ ಹೋದಳು. ಆದರೆ ಇರುವುದು
ಒಂದೇ ವರ ಎಂಬುದನ್ನು ಕೂಡ ಹೇಳಲಾರಳು.
ಮಾದ್ರಿಯನ್ನು ಕರೆದು ಮಂತ್ರೋಪದೇಶವನ್ನು ಮಾಡಿದಳು. ಅತ್ಯಂತ
ಸಂತುಷ್ಟಳಾಗಿ ಉಪದೇಶವನ್ನು ಭಕ್ತಿಯಿಂದ ಪಡೆದುಕೊಂಡಳು ಮಾದ್ರಿ. ಈಗ ಯಾವ ದೇವತೆಯನ್ನು
ಸ್ತುತಿಸಬೇಕೆಂಬುದು ಅವಳ ಚಿಂತೆಯಾಯಿತು. ಮತ್ತೊಮ್ಮೆ ತಾನು ಮಂತ್ರವನ್ನು ಪ್ರಯೋಗಿಸುವ ಅವಕಾಶ
ಸಿಗುವುದೋ ಇಲ್ಲವೋ,
ತನಗೆ ಒಂದಾದರೂ ಪುತ್ರಪ್ರಾಪ್ತಿಯಾಗುವುದೇ
ಸಂತೋಷದ ವಿಷಯ. ಹಾಗಾಗಿ ತುಂಬಾ ಚಿಂತಿಸಿ, ಸದಾ ಜೊತೆಗೆ ಇರುವ ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ ಮುದ್ದಾದ
ಅವಳಿ ಮಕ್ಕಳನ್ನು ಪಡೆದಳು.
ಮಂತ್ರೋಪದೇಶ ಮಾಡಿದ್ದ ಕುಂತಿ ಮಾದ್ರಿಯ ಜಾಣ್ಮೆಗೆ ಬೆರಗಾದಳು. ಕೊಂಚ ಅಸೂಯೆಯೂ
ಮೂಡಿತು. ಕೇವಲ ಭಾವುಕತೆ, ಉತ್ಕಟ ಭಕ್ತಿ, ಉಪಾಸನೆಯ ಮನೋಭಾವವೊಂದೇ ಅಲ್ಲ, ಬದುಕಿನಲ್ಲಿ ಜಾಣ್ಮೆ ಕೂಡ
ಅಷ್ಟೇ ಮುಖ್ಯ ಎಂಬುದನ್ನು ಅರ್ಥೈಸಿಕೊಂಡಳು. ಒಂದೇ ವರದಲ್ಲಿ ಎರಡು ಮಕ್ಕಳನ್ನು ಪಡೆದ ಅವಳ
ಜಾಣತನಕ್ಕೆ ತಲೆದೂಗಿದಳು.
ಪಾಂಡು ಕೂಡ ಅತ್ಯಂತ ಸುಖಿಯಾಗಿದ್ದ. ಈಗ ಮತ್ತೊಂದು ವರ ಉಳಿದಿದೆಯಲ್ಲ
ಅದನ್ನೂ ಮಾದ್ರಿಗೆ ಉಪದೇಶಿಸಿಬಿಡು ಎಂದು ತಾನಾಗಿಯೇ ಮಾದ್ರಿಯ ಪರವಾಗಿ ಕೇಳಿಕೊಂಡ ಪಾಂಡು.
ಉಭಯಸಂಕಟಕ್ಕೆ ಸಿಲುಕಿಕೊಂಡಳು ಕುಂತಿ. ಇನ್ನೆಲ್ಲಿ ಉಳಿದಿವೆ
ಪುತ್ರಪ್ರಾಪ್ತಿಯ ವರಗಳು? ಈಗಾಗಲೇ
ಸೂರ್ಯನನ್ನು ಪ್ರಾರ್ಥಿಸಿ ಕರ್ಣನಿಗೆ ಜನ್ಮ ಕೊಟ್ಟದ್ದನ್ನು ಹೇಳಲಾರಳು. ಆದರೆ ಹೇಳಿ
ತಪ್ಪಿತಸ್ಥಳಾಗಲಾರಳು. ಅದನ್ನು ಬೇರೆಯದೇ ರೀತಿಯಲ್ಲಿ ನಿವೇದಿಸಿದಳು. "ನಿಮಗೆ ಕಿರಿರಾಣಿ
ಮಾದ್ರಿಯ ಮೇಲೆ ನನಗಿಂತ ಪ್ರೇಮವಿದೆ ಎಂಬುದನ್ನು ಬಲ್ಲೆ ಮಹಾರಾಜ, ಆದರೆ ಒಂದು ವರಕ್ಕೆ ಎರಡು
ಪುತ್ರರನ್ನು ಪಡೆದು ಅವಳು ನನ್ನನ್ನು ವಂಚಿಸಿದಳು. ಈಗ ಮತ್ತೊಂದು ವರಕ್ಕೆ ಮತ್ತೆರಡು
ಪುತ್ರರನ್ನು ಪಡೆದು ಮಾದ್ರೇಯರು ನಾಲ್ಕಾಗಿ, ಕೌಂತೇಯರು ಮೂರೇ ಆಗಿಬಿಡುವರು." ಎಂದು ನಿರಾಕರಿಸಿಬಿಟ್ಟಳು.
ಪಾಂಡುವಿನ ಮನದಲ್ಲಿ ಅದೊಂದು ಕೊರಗು ಉಳಿದುಬಿಟ್ಟಿತು.
ಪಾಂಡವ ಪುತ್ರರು ಬೆಳೆಯುತ್ತಿದ್ದಂತೆ ಅವರ ವಿದ್ಯಾಭ್ಯಾಸದ ಚಿಂತೆ
ಪ್ರಾರಂಭವಾಯಿತು. ಹಸ್ತಿನಾಪುರಕ್ಕೆ ಮಕ್ಕಳನ್ನು ಕಳುಹಿಸಿ ರಾಜಗುರುಗಳಿಗೆ ವಹಿಸಬೇಕೆಂಬ ವಿಚಾರ
ಪಾಂಡುವಿಗೆ. ಅದರಂತೆ ಮಾದ್ರಿ ಕುಂತಿಯೊಂದಿಗೆ ಮಾತನಾಡಿದಳು. "ಅಕ್ಕ, ಈ 5 ಮಕ್ಕಳ ಜವಾಬ್ದಾರಿಯನ್ನು
ನೀವೇ ವಹಿಸಿಕೊಂಡು ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಅರಮನೆಗೆ ಹಿಂದಿರುಗಿ. ನಾನು
ಮಹಾರಾಜರೊಂದಿಗೆ ಅವರ ಸೇವೆ ಮಾಡಲು ಇಲ್ಲೇ ಉಳಿದುಕೊಳ್ಳುತ್ತೇನೆ. ನನ್ನ ಮಕ್ಕಳು ಬೇರೆಯಲ್ಲ, ನಿಮ್ಮ ಮಕ್ಕಳು ಬೇರೆಯಲ್ಲ, ಇವರು ಪಂಚ ಪಾಂಡವರು, ದಯಮಾಡಿ ನೀವೇ ಅರಮನೆಗೆ
ಮಕ್ಕಳೊಂದಿಗೆ ತೆರಳಬೇಕೆಂದು" ಕೇಳಿಕೊಂಡಳು.
ಕುಂತಿಯೂ ಅದಕ್ಕೆ ಒಪ್ಪಿ ಹಸ್ತಿನಾಪುರಕ್ಕೆ ತೆರಳಿ ಮಕ್ಕಳ
ವಿದ್ಯಾಭ್ಯಾಸದ ಬಗ್ಗೆ ಗಮನವಿತ್ತಳು.
*
ಪಂಚ ಪಾಂಡವರು ಸಕಲ ರೀತಿಯ ವಿದ್ಯೆಗಳಲ್ಲಿ ಪಾರಂಗತರಾಗುವ ನಿಟ್ಟಿನಿಂದ
ಹಸ್ತಿನಾಪುರಕ್ಕೆ ಹೊರಟುಹೋದರು, ಜೊತೆಯಲ್ಲಿ
ಕುಂತಿಯೂ. ಅವರ ಸುವಾರ್ತೆಯು ಆಗಾಗ ದೂತರ ಮೂಲಕ ಪಾಂಡುವಿಗೆ ಬಂದು ತಲುಪುತ್ತಿತ್ತು. ಈಗ
ಕುಟೀರದಲ್ಲಿ ಪಾಂಡು ಮಾದ್ರಿಯರಿಬ್ಬರೇ... ಯಾವುದೇ ಚಿಂತೆಗಳಿಲ್ಲದೇ ತಪಸ್ವಿಯಂತೆಯೇ ಜೀವನ
ಸಾಗುತ್ತಿತ್ತು. ಮಾದ್ರಿಯೆಡೆಗಿನ ಮೋಹ, ಕುಂತಿಯ
ಪುತ್ರಪ್ರಾಪ್ತಿಯ ಕೊನೆಯ ವರದ ಉಪದೇಶದ ನಿರಾಕರಣೆ ಇನ್ನೂ ಪಾಂಡುವಿನ ಮನಸಿನಲ್ಲಿತ್ತು. ಮಾದ್ರಿಗೆ
ಮತ್ತೊಮ್ಮೆ ಮಕ್ಕಳಾಗಬಹುದಿತ್ತಲ್ಲ, ಇಬ್ಬರು ಮಕ್ಕಳನ್ನು
ಪಡೆದು ಅವರನ್ನೂ ಕೂಡ ದೂರ ಕಳುಹಿಸಿಬಿಟ್ಟಳು. ಪತಿಯ ಜೊತೆಗಿದ್ದೂ ಸಖ್ಯವಿಲ್ಲ, ಮಕ್ಕಳಿದ್ದೂ ಸುಖವಿಲ್ಲ.
ಪಾಂಡುವಿನ ಮನ ಮಾದ್ರಿಗಾಗಿ ಕರಗಿ ನೀರಾಯಿತು.
ಎಂದಿನಂತೆ ಕುಟೀರದ ಹೊರಗಿನ ಹಗ್ಗದ ತಲ್ಪದ ಮೇಲೆ ಕುಳಿತಿದ್ದ
ಪಾಂಡುವಿಗೆ ಅದೇ ತಾನೇ ಸನಿಹದ ತೊರೆಯಿಂದ ಸ್ನಾನ ಮುಗಿಸಿ ಸೊಂಟದ ಮೇಲೆ ನೀರಿನ ಕುಂಭವನ್ನು
ಹೊತ್ತು ಬಳುಕಿ ಬರುತ್ತಿದ್ದ ಮಾದ್ರಿಯ ಚೆಲುವು ಕಣ್ಣಿಗೆ ಬಿತ್ತು. ಪ್ರತಿ ಹೆಜ್ಜೆಗೂ
ಬಳುಕುತ್ತಿದ್ದ ಸೊಂಟದ ನಾದಕ್ಕೆ ಕುಂಭದ ನೀರು ತುಳುಕಿ ಮಾದ್ರಿಯ ಮೈ ಒದ್ದೆಯಾಗಿಸಿತ್ತು. ಸ್ನಾನ
ಮಾಡಿ ಉಟ್ಟ ಒದ್ದೆಯಾದ ತುಂಡುಡುಗೆ ಅವಳ ಸೌಂದರ್ಯವನ್ನು ಮುಚ್ಚಿಡಲು ಅಸಫಲವಾಗಿತ್ತು. ಅನೇಕ
ವರ್ಷಗಳಿಂದಲೂ ಬ್ರಹ್ಮಚರ್ಯವನ್ನು ಕಾಪಾಡಿಕೊಂಡಿದ್ದ ಪಾಂಡುವಿನ ಸಂಯಮದ ಕಟ್ಟೆ ಒಡೆದುಹೋಯಿತು.
ಕಿಂದಮನ ಶಾಪವೂ ಮರೆತುಹೋಯಿತು, ಉನ್ಮತ್ತನಂತೆ ಮಾದ್ರಿಯೆಡೆಗೆ ಧಾವಿಸಿದ ಪಾಂಡು, ಮಾದ್ರಿಯ ಅರಿವಿಗೆ ಬರುವ
ಮುನ್ನವೇ ತನ್ನ ಬಾಹುಗಳಿಂದ ಅವಳನ್ನು ಬಿಗಿದಪ್ಪಿ ಚುಂಬಿಸಿದ. ಅದೆಷ್ಟೋ ವರುಷಗಳಿಂದ ಪತಿಯ
ಸಾನ್ನಿಧ್ಯವಿಲ್ಲದೇ ಕಂಗೆಟ್ಟಿದ್ದ ಮಾದ್ರಿಯ ತನುಮನಗಳು ಇದ್ದಕ್ಕಿದಂತೆ ಜಾಗ್ರತಗೊಂಡವು. ಪತಿಯ
ಅಪ್ಪುಗೆಯ ಬಿಗಿತದ ಸುಖವನ್ನು ಅನುಭವಿಸಲು ಉದ್ಯುಕ್ತಳಾಗಿದ್ದಳಷ್ಟೇ! ಇದ್ದಕ್ಕಿದ್ದಂತೆ ಪಾಂಡು
ನಿಶ್ಚೇಷ್ಟಿತನಾಗಿಬಿಟ್ಟ. ಕಿಂದಮನ ಶಾಪ ಫಲಿಸಿತ್ತು. ದುಃಖದಿಂದ ಮಡುವಿನಲ್ಲಿ ಮುಳುಗಿದಳು
ಮಾದ್ರಿ, ಪಾಂಡುವಿನ ನಿಶ್ಚಲ ದೇಹದ
ಮೇಲೆ ಬಿದ್ದು ಉರುಳಿದಳು. ತನ್ನ ಅನಿಯಂತ್ರಿತ ಮನೋಕಾಮನೆಯನ್ನು ಹಳಿದುಕೊಂಡಳು. ತಾನಾದರೂ
ಎಚ್ಚರಿಸಬಹುದಿತ್ತಲ್ಲ ಪತಿಯನ್ನು! ಒಂದು ಕ್ಷಣದ ಮೈಮರೆವು ಪತಿಯ ಪ್ರಾಣಹರಣಕ್ಕೆ ಕಾರಣವಾಯಿತಲ್ಲ
ಎಂದು ಗೋಳಾಡಿದಳು.
ಅನತಿ ದೂರದಲ್ಲಿದ್ದ ಸಹಾಯಕನನ್ನು ಕರೆದು ಹಸ್ತಿನಾಪುರಕ್ಕೆ ದುಃಖದ
ವಾರ್ತೆಯನ್ನು ಕಳುಹಿಸಿದಳು.
ಪತಿಯ ಮರಣದ ವಾರ್ತೆಯನ್ನು ಕೇಳಿ ಕುಂತಿಯ ಎದೆ ಒಡೆಯಿತು. ಪತಿಯಿಂದ
ದೂರದಲ್ಲಿದ್ದರೂ ನೆಮ್ಮದಿಯಲ್ಲಿದ್ದಾನೆಂಬ ಭಾವನೆಯಿಂದ ಮಕ್ಕಳನ್ನು ನೋಡಿಕೊಂಡು ದಿನಗಳೆಯುತ್ತಿದ್ದ
ಕುಂತಿ, ಅತಿ ಶೀಘ್ರವಾಗಿ
ಮಕ್ಕಳೊಂದಿಗೆ ಕುಟೀರವನ್ನು ತಲುಪಿದಳು. ಅತ್ತು ಅತ್ತು ಕಣ್ಣೀರು ಬತ್ತಿ ಹೋದಂತಿದ್ದ
ಮಾದ್ರಿಯನ್ನು ಕಂಡಳು. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿ ಅತ್ತರು. ದುಃಖದ ಕಣ್ಣೀರು
ಬರಿದಾಗುವಂತೆ ಕಾಣಲಿಲ್ಲ. ಕೊನೆಗೊಮ್ಮೆ ಮಾದ್ರಿಯೇ ಎಚ್ಚೆತ್ತಳು. "ಅಕ್ಕ, ಅವರ ಮರಣಕ್ಕೆ ನಾನೇ ಕಾರಣಕರ್ತಳು!
ಅವರು ಪ್ರೇಮದಿಂದ ನನ್ನನ್ನು ಸಮೀಪಿಸಿದಾಗ ಅವರನ್ನು ಎಚ್ಚರಿಸಲಾರದೆ ಹೋದೆ! ನಾನೂ ಕೂಡ ಮೈ
ಮರೆತುಬಿಟ್ಟೆ ಅಕ್ಕ! ನಾನು ಅವರೊಂದಿಗೆ ಸಹಗಮನ ಮಾಡುತ್ತೇನೆ. ಸಾವಿನಲ್ಲಾದರೂ ಸರಿ, ನಾನವರನ್ನು ಸೇರುತ್ತೇನೆ.
ಮಕ್ಕಳ ಜವಾಬ್ದಾರಿ ನಿನಗಿರಲಿ ಅಕ್ಕ" ಎನ್ನುತ್ತಾ, ಪತಿಯ ಮರಣಕ್ಕೆ ತಾನೇ ಕಾರಣವೆಂದು ದೂಷಿಸಿಕೊಳ್ಳುತ್ತಿದ್ದ
ಮಾದ್ರಿಯನ್ನು ಸಮಾಧಾನಿಸಲಾಗದೇ ಸೋತಳು ಕುಂತಿ. ಮಾದ್ರಿ ಪಾಂಡುವಿನ ಚಿತೆಯಲ್ಲಿ ಸಹಗಮನ ಮಾಡಿದಳು.
ಅಗ್ನಿಕಾರ್ಯವನ್ನು ಮುಗಿಸಿ ದುಃಖತಪ್ತರಾಗಿ ಉಳಿದವರೆಲ್ಲರೂ
ಹಸ್ತಿನಾಪುರಕ್ಕೆ ಮರಳಿದರು.